ಬೆನ್‍ಗೂರಿಯನ್, ಡೇವಿಡ್
1886-1973. ಇಸ್ರೇಲಿನ ಪ್ರಥಮ ಪ್ರಧಾನ ಮಂತ್ರಿ. ರಾಜನೀತಜ್ಞ. ರಾಷ್ಟ್ರಪಿತ ಎಂಬ ಗೌರವಕ್ಕೆ ಪಾತ್ರನಾದವನು. ಪೋಲೆಂಡಿನ ಪ್ಲಾಟ್ಸ್ಕ್ ಎಂಬಲ್ಲಿ 1886 ಅಕ್ಟೋಬರ್ 16ರಂದು ಜನನ. ಡೇವಿಡ್ ಗ್ರೂಯಿನ್ ಈತನ ಹುಟ್ಟು ಹೆಸರು. ತಂದೆ ವಿಕ್ಕರ್ ಗ್ರೂಯಿನ್, ಯಹೂದ್ಯ ಸ್ವಾಸ್ಥ್ಯವಾದಿ ಗುಂಪಿನ (ಸೈಆನ್) ನಾಯಕ. ತಂದೆಯ ವಾದವನ್ನು ಒಪ್ಪಿ ಮೆಚ್ಚಿಕೊಂಡ ಈತ ಯಹೂದ್ಯ ಸ್ವಾಸ್ಥ್ಯ ಸ್ಥಾಪನೆಯ ಪ್ರಥಮ ಹೆಜ್ಜೆಯಾಗಿ ತನ್ನ 20ನೆಯ ವಯಸ್ಸಿನಲ್ಲಿ ಪ್ಯಾಲಸ್ತೀನಿಗೆ ಬಂದು ನೆಲಸಿದ. ಈ ಕಾಲದಲ್ಲಿ ತನ್ನ ಹೆಸರನ್ನು ಬೆನ್‍ಗೂರಿಯನ್ ಎಂದು ಬದಲಾಯಿಸಿಕೊಂಡ. 1907ರಲ್ಲಿ ಸೆóಆನಿಸ್ಟ್ ಸೋಷಲಿಸ್ಟ್ ಪಾರ್ಟಿ ಪಕ್ಷದ ಸಭೆಯಲ್ಲಿ ಯಹೂದಿಗಳ ಗುರಿಯಾದ ರಾಜಕೀಯ ಸ್ವಾತಂತ್ರ್ಯದ ಘೋಷಣೆ ಮಾಡಲಾಯಿತು. 

	ಪ್ರಥಮ ಮಹಾಯುದ್ಧ ಪ್ರಾರಂಭವಾದಾಗ ಟರ್ಕಿಯ ಆಡಳಿತಾಧಿಕಾರಿಗಳು ಬೆನ್‍ಗೂರಿಯನ್‍ನ್ನು ಒಟ್ಟೋಮಾನ್ ಸಾಮ್ರಾಜ್ಯದಿಂದ ಹೊರಹಾಕಿದರು. ಆಗ ಬೆನ್‍ಗೂರಿಯನ್ ನ್ಯೂಯಾರ್ಕಿಗೆ ಹೋದ. ಅಲ್ಲಿ ರಷ್ಯನ್ ಸಂಜಾತೆ ಪಾಲಿನ್ ಮುನ್ವೀಸ್ ಎಂಬಾಕೆಯನ್ನು ಮದುವೆಯಾದ, ಒಂದನೆಯ ಮಹಾಯುದ್ಧದ ಅಂತ್ಯದಲ್ಲಿ 1917 ನವೆಂಬರ್ 2ರ ಬಾಲ್‍ಫೋರ್ ಘೋಷಣೆಯಲ್ಲಿ ಬ್ರಿಟಷ್ ಸರ್ಕಾರ ಯಹೂದಿಗಳಿಗೆ ತಾಯಿನಾಡನ್ನು ರಚಿಸಿಕೊಡುವ ಭರವಸೆ ನೀಡಿತು. ಬೆನ್‍ಗೂರಿಯನ್ ಪ್ಯಾಲಿಸ್ತೀನನ್ನು ಒಟ್ಟೋಮಾನ್ ಆಡಳಿತದಿಂದ ಮುಕ್ತಿಗೊಳಿಸುವ ಸೈನ್ಯಕ್ಕೆ ಸೇರಲು ಮತ್ತೆ ಹಿಂದಕ್ಕೆ ಬಂದ. ಇಷ್ಟರಲ್ಲಿ ಟರ್ಕರನ್ನು ಬ್ರಿಟಿಷರು ಸೋಲಿಸಿದ್ದರು. ಪ್ಯಾಲಸ್ತೀನ್ ತೌರುನಾಡಿನಲ್ಲಿ ಬಂದು ಯಹೂದ್ಯರು ನೆಲಸಲು ಬೆನ್‍ಗೂರಿಯನ್ ಕರೆ ನೀಡಿದ. ಪ್ರಪಂಚದ ನಾನಾ ಕಡೆಗಳಿಂದ ಯಹೂದಿಗಳು ಪ್ಯಾಲಿಸ್ತೀನಿಗೆ ಬಂದು ನೆಲಸತೊಡಗಿದರು. ಬೆನ್‍ಗೂರಿಯನ್ನನ ನೇತೃತ್ವದಲ್ಲಿ 1930ರಲ್ಲಿ ಇಸ್ರೇಲ್ ಕಾರ್ಮಿಕರ ಪಕ್ಷ ಸ್ಥಾಪನೆಗೊಂಡಿತು. 1935ರಲ್ಲಿ ಪ್ರಪಂಚ ಯಹೂದಿಗಳ ಕಾರ್ಯಾಕಾರಿ ಸಮಿತಿಯ ಅಧ್ಯಕ್ಷನನ್ನಾಗಿ ಬೆನ್‍ಗೂರಿಯನ್ನನನ್ನು ಆರಿಸಲಾಯಿತು. ಯಹೂದಿಗಳ ಈ ಸಂಘಟನೆ ಮತ್ತು ನೆಲೆಯನ್ನು ಅರಬ್ಬರು ವಿರೋಧಿಸಿ ಫರ್ಷಣೆಗಳಾಗ ತೊಡಗಿದವು. 1939ರಲ್ಲಿ ಬ್ರಿಟಿಷ್ ಸರ್ಕಾರ ತನ್ನ ಧೋರಣೆ ಬದಲಿಸಿ ಅರಬ್ಬರ ಪರ ವಾಲಿತು. ಬೆನ್‍ಗೂರಿಯನ್ ಬ್ರಿಟನನ್ನು ಬಲವಾಗಿ ವಿರೋಧಿಸಿದ್ದಲ್ಲದೆ ಯಹೂದಿಗಳ ಸಂಘಟನೆಯನ್ನು ತೀವ್ರಗೊಳಿಸಿದ ಕೂಡ. ಮುಂದೆ ವಿಶ್ವಸಂಸ್ಥೆಯ ಮಹಾಸಭೆಯ ತೀರ್ಮಾನದಂತೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಸೋಮಿಯತ್ ದೇಶದ ಬೆಂಬಲಗಳೊಡನೆ 1948 ಮೇ 14ರಂದು ಬೆನ್‍ಗೂರಿಯನ್ ಸ್ವತಂತ್ರ ಇಸ್ರೇಲ್ ರಾಜ್ಯದ ಉದಯವನ್ನು ಸಾರಿಬಿಟ್ಟ. ಪ್ರಧಾನ ಮಂತ್ರಿ ಬೆನ್‍ಗೂರಿಯನ್ ರಕ್ಷಣಾ ಇಲಾಖೆಯ ಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ (1948-53). ಸಿರಿಯ, ಜಾರ್ಡನ್, ಇರಾಕ್ ಮತ್ತು ಈಜಿಪ್ಟ್ ಈ ಸುತ್ತಲ ಅರಬ್ ದೇಶಗಳು ಇಸ್ರೇಲಿನ ಮೇಲೆ ಯುದ್ಧ ಮಾಡಿ ಸೋತವು. ಈ ಯುದ್ಧಗಳ ಜೊತೆಗೆ ಬೆನ್‍ಗೂರಿಯನ್ ಹೊಸ ರಾಜ್ಯದ ಅನೇಕ ತೀವ್ರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿತ್ತು. ಪ್ರಪಂಚದ ನಾನಾ ಕಡೆಗಳಿಂದ ಬರುವ ಯಹೂದಿಗಳನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸುವುದು. ಅವರಲ್ಲೆ ಇರುವ ನಾನಾ ಗುಂಪುಗಳ ಮಧ್ಯೆ ಸಾಮರಸ್ಯ ತರುವುದು, ಸರ್ವಸಮ್ಮತ ಸಾರ್ವಜನಿಕ ವಿದ್ಯಾಭ್ಯಾಸ ಕ್ರಮ ರೂಪಿಸುವುದು, ಮರುಭೂಮಿಯ ಬಳಕೆ ಇತ್ಯಾದಿ. ಬೆನ್‍ಗೂರಿಯನ್ ತನ್ನ ಸ್ವತಂತ್ರ, ಮತ್ತು ಸಮಯೋಚಿತ ವಿದೇಶಿ ನೀತಿಯಿಂದಾಗಿ ಜನಪ್ರಿಯನಾದ. ಬ್ರಿಟನ್ ಮತ್ತು ಅಮೆರಿಕ ದೇಶಗಳು ಬೆನ್‍ಗೂರಿಯನ್ ಆಡಳಿತವನ್ನೂ ವಿದೇಶಿ ನೀತಿಯನ್ನೂ ಮೆಚ್ಚಿಕೊಂಡರೂ ತೈಲೋದ್ಯಮ ಪತಿಗಳಾದ ಅರಬ್ಬರ ಕೂಡ ನಿಷ್ಠುರಗಳಿಸಿ ಕೊಳ್ಳಲು ಇಷ್ಟಪಡಲಿಲ್ಲ. 1953 ರಿಂದ 55ರ ತನಕ ಬೇರೆಯವರಿಗೆ ಅಧಿಕಾರ ಬಿಟ್ಟುಕೊಟ್ಟ ಬೆನ್‍ಗೂರಿಯನ್ ಮತ್ತೆ 1955 ರಿಂದ 1963ರ ತನಕ ಪ್ರಧಾನಮಂತ್ರಿಯಾಗಿ ಇಸ್ರೇಲನ್ನು ಅಭಿವೃದ್ಧಿಗೆ ತಂದ. ಅರಬ್ಬರೊಡನೆ ಯುದ್ಧ ಮಾಡಿ ಇಸ್ರೇಲಿಗೆ ಗೆಲವು ತಂದ. 

	ಬೆನ್‍ಗೂರಿಯನ್ 1965ರಲ್ಲಿ ತಮ್ಮ ಪಕ್ಷ ಬಿಟ್ಟಿದ್ದಲ್ಲದೆ 1970ರಲ್ಲಿ ತಮ್ಮ ಎಲ್ಲ ರಾಜಕೀಯ ಚಟುವಟಿಕೆಗಳನ್ನೂ ತ್ಯಜಿಸಿ ತನ್ನ ಜೀವನ ಚರಿತ್ರೆ ಬರೆಯಲಾರಂಭಿಸಿದ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ. 1973 ಡಿಸೆಂಬರ್ 1 ರಂದು ಟೆಲ್ ಅವೀವ್‍ನಲ್ಲಿ ಮೃತನಾದ.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ